Wednesday, October 12, 2011

ಕೊಂಡಿ

 ಇಂದಿನಲ್ಲಿ ಸುಖವಿಲ್ಲದಿದ್ದರೆ, ಹಲವಾರು ಸಂಗತಿಗಳಲ್ಲಿ  ಮನುಷ್ಯ ಭೂತದಲ್ಲೇ ಸುಖ ಕಾಣುತ್ತಾನೆ.
ಭವಿಷ್ಯ ಕಂಡಿಲ್ಲ, ವರ್ತಮಾನದಲ್ಲಿ ಸುಖವಿಲ್ಲ, ಉಳಿದದ್ದು ಭೂತ ಆದ್ದರಿಂದ ಅದೇ ಸುಖ !

ಈ ಭೂತ(?), ವರ್ತಮಾನ(?), ಭವಿಷ್ಯದ(?) ಪೀಳಿಗೆಗಳಿಗೆ ತಿಕ್ಕಾಟ ಬಂದರೆ, ವರ್ತಮಾನದ
ಪರಿಸ್ಥಿತಿ ಗಂಭೀರ.  ಏಕೆಂದರೆ ಅದಕ್ಕೆ ಭೂತದ ವಾತ್ಸಲ್ಯವೂ ಬೇಕು ಭವಿಷ್ಯದ  ಪ್ರೀತಿಯೂ ಬೇಕು

ಅಜ್ಜಿಯ ಟ್ರಂಕು
ಮಗಳ ವಾರ್ಡ್ರೋಬು
ನಡುವೆ
ಅವಳ ಗೋದ್ರೆಜ್ ಅಲಮಾರ
ಅದೆಷ್ಟು ಜತನದಿಂದ ಅದಕ್ಕೆ ಹ್ಯಾಂಗರುಗಳನ್ನ ತಂದಿದ್ದಳೋ? !
ಈಗ ಮಡಚಿಡುವ ರೀತಿಯೇ ಬೇರೆ
ಬದುಕ ತೆರೆದಿಡುವ ರೀತಿಯೇ ಬೇರೆ

ಅಜ್ಜಿಯ ಇದ್ದಲೋಲೆ
ಮಗಳ ಚಿಮಣಿ ಹಾಬಿಗೆ
ಮಧ್ಯೆ
ಅವಳ ಸನ್ ಫ್ಲೇಮ್  ಸ್ಟೋವು
ಅದರ ಚೀಟಿ ದುಡ್ಡನ್ನ ಅದ್ಹೇಗೆ ಹೊಂದಿಸಿದ್ದಳೋ? !
ಈಗ ಅಟ್ಟುವ ರೀತಿಯೇ ಬೇರೆ
ಬದುಕ ಮುಟ್ಟುವ ರೀತಿಯೇ ಬೇರೆ

ಅಜ್ಜಿಯ ಬಾಳೆಕಾಯಿ ಗಂಟು
ಮಗಳ ಕ್ರೆಡಿಟ್ ಕಾರ್ಡಿಗೆ
ನಡುವೆ
ಅವಳ ಪಾಸ್ ಬುಕ್ಕು
ಅದೆಷ್ಟು ಜತನದಿಂದ ಆರ್ ಡಿ ಕಟ್ಟಿದ್ದಳೋ ?!
ಈಗ ಉಳಿಸುವ ರೀತಿಯೇ ಬೇರೆ
ಬದುಕ ಗಳಿಸುವ ರೀತಿಯೇ ಬೇರೆ

ಎಷ್ಟೊಂದು ಬದಲಾವಣೆಗಳು ಅವಳ ಸುತ್ತ !
ಮೊನ್ನೆ ಅವಳು  ಕೊಂಡಿಯ ಕೊನೆಯ  ಮೊಮ್ಮಗಳು
ಇಂದು ಅವಳು ಕೊಂಡಿಯ ಮಧ್ಯದ ಅಮ್ಮ
ನಾಳೆ ಅವಳು ಕೊಂಡಿಯ ಆ ಕೊನೆಯ ಅಜ್ಜಿ !





2 comments:

  1. ಸ್ವರ್ಣಾ,
    ‘ನಿನ್ನೆ—ಇಂದು—ನಾಳೆ’ ಗಳ ಚಿತ್ರವನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ.
    ಕವನದ ರಚನೆಯೂ ಸ್ವಾರಸ್ಯಕರವಾಗಿದೆ. ಮೊದಲಿನ ನಾಲ್ಕು ಸಾಲುಗಳಲ್ಲಿ ಅಜ್ಜಿ, ಮಗಳು ಹಾಗು ಮೊಮ್ಮಗಳ ಜೀವನವಿಧಾನದ ಭೇದವನ್ನು ಪ್ರತೀಕಗಳಲ್ಲಿ ತೋರಿಸಿದ್ದೀರಿ. ಕವನದ ಲಯವನ್ನು ಮುರಿಯುವ ನಾಲ್ಕನೆಯ ಸಾಲು ತನ್ನ ಜೀವನವಿಧಾನಕ್ಕಾಗಿ ಇವಳು ಪಟ್ಟ ಪರಿಶ್ರಮ ತೋರಿದ್ದರೆ, ಕೊನೆಯ ಎರಡು ಸಾಲುಗಳು, ಥಟ್ಟನೆ ಬೇರೊಂದು ವಿಚಾರದ ಮಿಂಚನ್ನು ಹೊಡೆಯುತ್ತವೆ. ಈ ಮಿಂಚು ಕವನಕ್ಕೆ ವಿಶಿಷ್ಟ ಚೆಲುವನ್ನು ನೀಡಿದೆ. ಅಲ್ಲದೆ ವಾಸ್ತವಕ್ಕೆ resign ಆಗುವ ಅನುಭವ ನೀಡುತ್ತದೆ.
    ತುಂಬ ಉತ್ತಮ ಕವನ ಓದಿದಂತಹ ಸಂತೋಷವಾಗಿದೆ.

    ReplyDelete
  2. ಧನ್ಯವಾಗಳು ಸುನಾಥ್ ಸರ್.
    ನಿಮ್ಮಂಥವರ ಪೋಸ್ಟ್ಗಳನ್ನ ಓದಿ,
    ಇವೆಲ್ಲ ಬರೆಯುವ ಪ್ರಯತ್ನಗಳಷ್ಟೇ :)

    ReplyDelete