Friday, November 11, 2011

ಚರಣದಿಂದಲೇ ಕಾರ್ಯವಾಗುತಿರೆ ಕರಗಳೇಕೆ ಬೇಕು?

ತ್ವದನ್ಯ: ಪಾಣಿಭ್ಯಾಂ ಅಭಯ ವರದೋ ದೈವತಗಣ:
ತ್ವಮೇಕಾ ನೈವಾಸಿ ಪ್ರಕಟಿತ ವರಾಭೀತ್ಯಭಿನಯಾ|
ಭಯಾತ್ ತ್ರಾತುಂ ದಾತುಂ ಫಲಮಪಿ ಚ ವಾಂಛಾ ಸಮಧಿಕಂ
ಶರಣ್ಯೇ ಲೋಕಾನಾಂ ತವಹಿ ಚರಣಾವೇವ ನಿಪುಣೌ||


ಬೇಂದ್ರೆಯವರ ಅನುವಾದ :
ಅಭಯವರದ ಕರಮುದ್ರೆ ಇಹುದು ಆ ಹಿಂಡು ದೈವಗಳಿಗೆ
ಕೊಡುವೆ ನೀನು, ಸುಳಿದಿಲ್ಲ ತಾಯಿ ಆ ನಟನೆ ನಿನ್ನ ಬಳಿಗೆ,
ಭಯವಹಿಂಗುವೊಲು ಮಿಕ್ಕಿಫಲವಕೊಡೆ ನೀ ಶರಣ್ಯೆ ಸಾಕು
ಚರಣದಿಂದಲೇ ಕಾರ್ಯವಾಗುತಿರೆ ಕರಗಳೇಕೆ ಬೇಕು
 

ರಮಣ ಮಹರ್ಷಿಗಳೊಡನೆ ಯಾರೋ ಕುತೂಹಲಿಗಳು ಕೇಳಿದರಂತೆ: ತ್ರಿಮೂರ್ತಿಗಳು ನಿಮ್ಮ ಮುಂದೆ ಕಾಣಿಸಿಕೊಂಡರೆ, ಅವರೊಡನೆ ಏನು ಕೇಳುವಿರಿ? ರಮಣ ಹೇಳಿದರಂತೆ: ಇನ್ನೊಮ್ಮೆ ಹೀಗೆ ಕಾಣಿಸಿಕೊಳ್ಳುವ ತೊಂದರೆಯನ್ನು ದಯವಿಟ್ಟು ತೆಗೆದುಕೊಳ್ಳಬೇಡಿ ಎನ್ನುವೆ. ಇದು ಜ್ಞಾನದ ಸ್ಥಿತಿ! ನೋಡಬೇಕೆನ್ನುವುದು ಚಪಲವಾದರೆ, ತೋರಿಸಬೇಕೆನ್ನುವುದೂ ಚಪಲವೇ. ಈ ಇಬ್ಬಗೆಯ ಚಪಲದಿಂದಲೂ ಬಿಡುಗಡೆಯೇ ಅರಿವಿನ ಅವಸ್ಥೆ!  

ಇದಕ್ಕೆ ಹೊಂದುವಂತೆ ಸತ್ಯವು ಅಡಗಿದೆ- ತತ್ತ್ವಂ ನಿಹಿತಂ ಗುಹಾಯಾಂ -ಎಂಬುದಿದು ಪುರಾತನವಾದ ಮಾತು. ಅದು ಹುಡಕಾಟಕ್ಕೆ ಹಚ್ಚುವ ಮಾತಾದುದರಿಂದ ಇಂದಿಗೂ ಜೀವಂತವಾಗಿ ಮಿಡಿಯುವ ಮಾತು. ಸತ್ಯ ಎಲ್ಲಿ ಅಡಗಿದೆ? ಇಲ್ಲೇ- ಇಹದಲ್ಲಿ, ಈ ಸೃಷ್ಟಿಯಲ್ಲಿ, ಈ ನಮ್ಮ ಬಾಳಿನಲ್ಲಿ= ನಮ್ಮಲ್ಲಿ. ಬಹಿರ್ಮುಖ- ಅಂತರ್ಮುಖ, ಹೊರಗೆ- ಒಳಗೆ, ತೋರಿಕೆ-ಇರುವಿಕೆ, ನಟನೆ- ಸಹಜತೆ, ವೇಷ-ನಿಜ, ಬಯಕೆ-ಶೋಧನೆ- ಇಂಥ ಅರ್ಥಗಳನ್ನು ಕೊಡುವ ಪದಗಳಿಲ್ಲದ ಭಾಷೆ ಯಾವುದಾದರೂ ಇರಬಹುದೆ? ಈ ವಿಷಯ ಯಾವುದನ್ನು ತಿಳಿಸುತ್ತದೆ? ಶೋಧಿಸಿಯೇ ತಿಳಿಯಬೇಕಾದ ಸತ್ಯವೊಂದಿದೆ ಎಂಬುದನ್ನು. ಆ ಸತ್ಯ ಗಹನವಾದದ್ದು. ಶೋಧನೆಗೆ ಎರಡು ಅಡ್ಡಿಗಳಿವೆ. ತೋರಿಕೆಯ ಕುರಿತಾದ ಮೋಹ ಮತ್ತು ಆಳದಲ್ಲಿರುವ ಸತ್ಯದ ಕುರಿತಂತೆ ಭಯ. ಇವೆರಡೂ ನಮ್ಮಲ್ಲಿಯೇ ಇವೆ. ಎಂದರೆ ನಮ್ಮ ತೋರಿಕೆಯ, ಲೋಕ ಪರಿಚಿತ ವ್ಯಕ್ತಿತ್ತ್ವದ ಕುರಿತಂತೆ ನಮಗೇ ಮೋಹ. ಮತ್ತು ನಮ್ಮದೇ ಆದ ಆದರೆ ನಮಗೆ ಅಪರಿಚಿತವಾದ ನಮ್ಮ ಆಳದ ಸತ್ಯದ ಕುರಿತಾಗಿ ಭಯ. ನಮ್ಮ ಮೇಲೇ ನಮಗೆ ಮೋಹ! ನಮ್ಮ ಕುರಿತೇ ನಮಗೆ ಭಯ! ಇದಕ್ಕಿಂತ ವಿಲಕ್ಷಣವಾದ ಸಂಗತಿ ಇನ್ನಾವುದು?

ಇದು ನಟನೆಯ ಲೋಕ ಎನ್ನುತ್ತಾರೆ ಆಚಾರ್ಯರು. ಅಭಿನಯದ ಲೋಕ! ಆದುದರಿಂದಲೇ ಆಳ ಅನು-ಭವದ ಲೋಕವಲ್ಲ. ಅಭಿನಯದ ಲೋಕದಿಂದ ಅನು-ಭವದ ಲೋಕದ ದಿಕ್ಕಿಗೆ ಹೋಗಲು, ಸಂಸಾರಿಗೆ ತನ್ನ ಸಂಸಾರದ ಮೋಹದಂತೆ, ಉಪಾಸಕನಿಗೆ ಅವನು ಉಪಾಸಿಸುವ ದೇವತೆಗಳ ಮೋಹವೇ ಅಡ್ಡಿಯಾಗುವುದಂತೆ. ಒಂದು ದೃಷ್ಟಾಂತದ ಮೂಲಕ ನೋಡುವುದಾದರೆ- ಪೋಲ್ ವಾಲ್ಟ್ ಎನ್ನುವುದೊಂದು ಕ್ರೀಡೆ. ಜನಪ್ರಿಯ. ಅದರಲ್ಲಿ, ಉದ್ದನೆಯ ಒಂದು ದಂಡ( Pole)ವನ್ನು ಹಿಡಿದುಕೊಂಡು ಧಾವಿಸಿ ಬಂದು ನೆಲದಲ್ಲೂರಿ ಅದರ ಬಲದಿಂದ ಆಗಸಕ್ಕೇರಿ ಅಲ್ಲಿ ಎತ್ತರದಲ್ಲಿ ಹಾಕಲಾಗಿರುವ ಗುರುತನ್ನು ದಾಟಬೇಕು. ಅಂದರೆ ಅದರಾಚೆಗೆ ಜಿಗಿಯಬೇಕು. ಆಚೆಗೆ ಜಿಗಿಯಬೇಕಾದರೆ ಅಷ್ಟು ಎತ್ತರಕ್ಕೆ ಏರಿಸಿದ ಈ ಪೋಲನ್ನು ಕೈಬಿಡಲೇಬೇಕು. ಆಚೆಗೆ ಜಿಗಿಯಬೇಕಾದರೆ ಅಷ್ಟು ಎತ್ತರಕ್ಕೆ ಏರಿಸಿದ, ಅಷ್ಟು ಕಾಲ ನಮ್ಮ ಅಂಗೈಯಪ್ಪುಗೆಯಲ್ಲಿದ್ದ ನಮ್ಮನ್ನು ನಂಬಿದ ಈ ದಂಡವನ್ನು ಕೈಬಿಡುವುದುಂಟೆ? ಕೃತಜ್ಞತೆಯಾದರೂ ಬೇಡವೆ? ಕೈಬಿಡದಿದ್ದರೆ ಅದೇ ತನ್ನೊಡನೆ ನಮ್ಮನ್ನೂ ಕೆಡಹುತ್ತದೆ- ಆಚೆಗಲ್ಲ; ಈಚೆಗೇ!
ಆಚೆಗೆ ಜಿಗಿಯುವುದೂ ಮೋಹವನ್ನು ಕಳೆದುಕೊಳ್ಳುವುದೂ ಏಕಕಾಲಕ್ಕೇ. ಎಲ್ಲ ಬಗೆಯ ಪರಿಚಿತತೆಯೇ ಮೋಹಕ್ಕೆ ಕಾರಣ. ಅದರಾಚೆಗಿನದು ನಾವು ಊಹಿಸಲಾಗದ ನಮ್ಮದೇ ಪ್ರಪಂಚ.  ಅಲ್ಲಿ ಪರಿಚಿತ ಮುದ್ರೆಗಳಿಲ್ಲ. ಬೇಕಿಲ್ಲ. ಅಲ್ಲಿ ನಟನೆಯಿಲ್ಲ. ಅದು ಎಲ್ಲ ವೇಷಗಳನ್ನೂ ಕಳಚಿದ ಹೊತ್ತು. ಅಲ್ಲಿರುವುದು ತಾಯ ಮಡಿಲು ಎನ್ನುತ್ತಾರೆ ಆಚಾರ್ಯ. ಆದುದರಿಂದಲೇ ಅಲ್ಲಿ ಹೊಸ-ಹುಟ್ಟು.

ಮೊಟ್ಟೆಯೊಳಗಿಂದ ’ನಾನು ಯಾರು’ ಎಂಬ ಸೊಲ್ಲು ಕೇಳಿ ಬಂದರೆ, ಕಾವು ಕೊಡುವುದಷ್ಟೆ ಉತ್ತರವಾಗಬಲ್ಲುದು. ಯಾವ ಮುದ್ರೆಯೂ ಉತ್ತರವಲ್ಲ. ಅಥವಾ ಸೂಫಿಗಳು ಹೇಳುವಂತೆ ನೀರೆಲ್ಲಿದೆ ಎಂದು ಮೀನು ಕೇಳಿದರೆ ಉತ್ತರ ಹೇಳಬೇಕೆಂದೇನು ಇಲ್ಲ. ಆ ಮೌನವೇ ಪ್ರಶ್ನೆಯನ್ನೂ ಮೌನವಾಗಿಸಿ ಚಿಂತನೆಗೆ ಹಚ್ಚಬಲ್ಲುದು. ಶರಣಾಗತಿಯ ಭಾವ ಹುಟ್ಟಿಕೊಳ್ಳುವುದು ಹೀಗೆ.
ಅಪೂರ್ವವಾದ ಈ ಹಾಡಿನಲ್ಲಿ ಆಚಾರ್ಯರು ಧ್ವನಿಸುವುದು:
ಕೈಮುಗಿಯುವುದು ನಮಸ್ಕಾರ ಮುದ್ರೆಯಾಗಿರಬಹುದು. ಕೈಚೆಲ್ಲುವುದು ಯಾವ ಮುದ್ರೆ? ಅದು ಸರ್ವ-ಶರಣಾಗತಿಯ ಚಿತ್ರ. ಚೆಲ್ಲಿದ ಕೈ ತಾಯ ಕಾಲಬಳಿ ವಿರಮಿಸುತ್ತದೆ. ತಾನು ತಲೆಕೆಳಗಾಗಿ ಕಾಲು ಮೇಲಾಗಿ ಈ ಭೂಮಿಗೆ ಬಂದ ಜೀವ, ಮರಳಿ ತಾಯ ಕಾಲ ಬಳಿ ತಲೆ ಇಟ್ಟಾಗಲೇ ತಾಯಿ ಎತ್ತಿಕೊಳ್ಳುವಳು. ತಾಯಿ ಎತ್ತಿಕೊಳ್ಳುವಾಗಲೇ ಜೀವ, ತಲೆ ಮೇಲಾಗಿ ಕಾಲು ಕೆಳಗಾಗಿರುವ ನೈಜ ಸ್ಥಿತಿಯನ್ನು ಅನುಭವಿಸುವುದು. ನಿಜಸ್ಥಿತಿಗಿಂತ ಭಿನ್ನವಾಗಿರುವುದೆಲ್ಲವೂ ನಟನೆ. ತಾಯಿಯೊಬ್ಬಲೇ ನಟನೆಯನ್ನು ಸರಿಪಡಿಸಬಲ್ಲಳು!

ಈ ದೇವತೆಗಳದೆಲ್ಲ ಮುದ್ರಾಮುಗ್ಧಸ್ಥಿತಿ. ತಾಯಿಯದು ಮಾತ್ರ ಅಚ್ಚಳಿಯದ ’ನಿಲುವು’. ಆ ನಿಲುವಿಗೆ ಶರಣೆನ್ನು. ಶರಣಾಗತಿಯು ತಾಯ್ತನದ ವಾತ್ಸಲ್ಯದ ಪರಿಪೂರ್ಣತೆಯನ್ನು ಕಂಡರಿಸಬಲ್ಲುದು.

ಮೂಲ : ಲಕ್ಷ್ಮೀಶ  ತೋಳ್ಪಾಡಿಯವರ ಸೌಂದರ್ಯ ಲಹರಿ ಸರಣಿ

 

 

2 comments:

  1. ಶಂಕರಾಚಾರ್ಯರ ಈ ಸುಂದರವಾದ ಶ್ಲೋಕಕ್ಕೆ ಮನಸ್ಸನ್ನು ತಾಕುವ ವಿವರಣೆ ಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete
  2. ಸರ್, ಇವು ತೊಲ್ಪಾದಿಯರ ಸಾಲುಗಳು :)
    ಮತ್ತೆ ಮತ್ತೆ ಓದಬೇಕೆನಿಸುವನ್ತಿರುವುದರಿಂದ ಇಲ್ಲಿ ಹಾಕಿದ್ದೇನೆ
    ಪ್ರತಿಕ್ರಿಯೆಗಾಗಿ ಧನ್ಯವಾದಗಳು

    ReplyDelete