Tuesday, November 22, 2011

ಕೊಳಲುಲಿ

೧. ನೆನ್ನೆ ಗೋಪಿಕೆಗೊಂದು ಕನಸು ಬಿತ್ತಂತೆ
ಮಾಧವನ ಕರೆಯಲು ಅದಾರೋ ಬಂದಂತೆ,
ಅವ ಹೊರಟು ನಿಂತಂತೆ ,
ತಾ ಅತ್ತಂತೆ
ಬೆಳಗಾಗೆದ್ದು ನೋಡಿದರೆ ವೃಂದಾವನದ ತುಂಬಾ ಅಕ್ರೂರನ ರಥದ ಧೂಳು !

೨. ಅದೆಷ್ಟು ಮಧುರವಾಗಿತ್ತು ,ಹೆಸರ ಹಂಗಿಲ್ಲದ  ಆ ಬಂಧ
ಪದಗಳೇ ಇಲ್ಲದ ಬರಿಯ ಭಾವ ಗೀತ
ಭಾವಕ್ಕೊಂದು ರಾಗ ಕೊಡುವ ಪ್ರಯತ್ನ ಪಟ್ಟೆ ನೀನು
ಅದಕೆ ಪದ ಬರೆವ ಪ್ರಯಾಸ ಪಟ್ಟೆ ನಾನು
ರಾಗ, ಪದಗಳ ಜಂಜಾಟದಲ್ಲಿ ಭಾವ ಮರೆಯಾಗಿ ಬಹು ಕಾಲವಾಯ್ತು !

೩. ಅವನ ಕೊಳಲ ಉಸಿರಾಗಿ ಅವನೊಂದಿಗೆ ಬೆರೆಯಬೇಕೆಂಬ ಆಸೆ ಗೋಪಿಕೆಯದು
   ಕೊಳಲನ್ನೇ ಬಿಟ್ಟು ಮಥುರೆಗೆ ಹೊರಡುವ ಅನಿವಾರ್ಯತೆ ಮುಕುಂದನದು !
   ನೆನಪಲ್ಲೇ ಕಾಲ ಕಳೆಯಲು ಅವಳು ರಾಧೆಯಲ್ಲ
   ಕಂಬನಿಗೆ ಕರವಾಗಲು ಅವನೇ ಬೇಕಲ್ಲ.

೪. ಅದೆಷ್ಟು ಸಹಿಸಿದ ಭುವಿಯಲ್ಲಿ ಜನಿಸಿ
    ಹುಟ್ಟಿದೊಡನೆ ತಾಯ್ತಂದೆಇಂದ ದೂರ,
    ಒಲುವು ಮೂಡುತ್ತಿರುವಾಗಲೇ ಸಖಿಇಂದ ದೂರ,
    ಬಂಧವಾಗುತ್ತಲೇ ಸಾಕಿದವರಿಂದಲೂ ದೂರ,
    ರಾಜ್ಯ ಗೆಲ್ಲುತ್ತಲೇ ಸಿಂಹಾಸನದಿಂದ ದೂರ,
   ಸಂಸಾರದಲ್ಲಿದ್ದು ಪತ್ನಿಯರಿಂದ ದೂರ,
   ಯುಧ್ಧದಲ್ಲಿದ್ದು ಶಸ್ತ್ರಗಳಿಂದ ದೂರ,
   ಗೆದ್ದ ಮೇಲೆ ಮತ್ತೆ ರಾಜ್ಯದಿಂದ ದೂರ ,
  ಕುಲದ ಅವನತಿಯೊಡನೆ ಕುಲದವರೆಲ್ಲರಿಂದ ದೂರ,
  ಅದಾರೋ ಬೇಡನ ಬಾಣಕ್ಕೆ ಸಿಕ್ಕಿ ಮತ್ತೆ ಭುವಿಯಿಂದ ದೂರ
  ಇಷ್ಟು ಸಹಿಸಿಯೂ ಬದುಕು ದುಸ್ತರವೆನ್ನದ ಅವನು ಮುಕುಂದ
  ಎಲ್ಲ ಕುಂದುಗಳ ನಡುವೆ ನಗುತ್ತಲೇ ಬಾಳಿದ ಕುಂದಿಲ್ಲದ ಮುಕುಂದ  !

7 comments:

  1. ಸ್ವರ್ಣಾ,
    ಕುಂದುಗಳಿಂದ ದೂರವಾದ ಮುಕುಂದನನ್ನು in a nutshell ಚಿತ್ರಿಸಿದ್ದೀರಿ. ಕೃಷ್ಣನ ವ್ಯಕ್ತಿತ್ವದ ಮೇಲೆ ಹೊಸ ಬೆಳಕು ಚೆಲ್ಲಿದ್ದೀರಿ. ನಿಮ್ಮ ಈ ಭಾವ-ಬಿಂದುಗಳು ಸೊಗಸಾಗಿವೆ.

    ReplyDelete
  2. ಧನ್ಯವಾದಗಳು ಸರ್.
    ಕೃಷ್ಣನನೆಂಬ ಚೈತನ್ಯವೇ ಅಂಥದು ಅಲ್ಲವೇ ಸರ್?
    ಬಿದಿರನ್ನು ಕೊಳಲಾಗಿಸಬಲ್ಲ ಕರಗಳವು
    ಸ್ವರ್ಣ

    ReplyDelete
  3. ಬಹು ರೊಚಕವಾಗಿ ಗೋಪಿ ಲೋಲನನ್ನು ಚಿತ್ರಿಸಿ ಕೊಟ್ಟಿದ್ದೀರ ಸ್ವರ್ಣಾ ಅವರೇ.

    ಒಂದು ಸಂಪೂರ್ಣ ಕೃಷ್ಣಾಯಣ ದರ್ಶಿಸಿ ಸಂತಸವಾಯ್ತ.

    ನಿಮ್ಮ ತಿಳಿಗನ್ನಡ ಭಾಷಾ ಬಳಕೆ, ಪದ ಬಂಧನದಲಿ ಲಾಲಿತ್ಯ ಮತ್ತು ಭಾವ ಪೂರ್ಣ ರಚನೆ ನನಗೆ ತುಂಬ ಇಷ್ಟವಾಯಿತು.

    (ನನ್ನ facebook profile : Badarinath Palavalli)

    ReplyDelete
  4. ಧನ್ಯವಾದಗಳು ಸರ್

    ReplyDelete
  5. ಸ್ಥಿತ ಪ್ರಜ್ಞ ಕೃಷ್ಣ ನ ಜೀವನ ಚಿತ್ರಣವನ್ನೇ ಸೆರೆಹಿಡಿಯುವ೦ತೆ ಕವನಿಸಿದ್ದೀರಿ ಸ್ವರ್ಣ, ಅಭಿನ೦ದನೆಗಳು.

    ReplyDelete
  6. ಕೃಷ್ಣನ ಚಿತ್ರಿಸುವ ಪುಟ್ಟ ಪ್ರಯತ್ನ ಮೆಚ್ಚಿದಕ್ಕಾಗಿ ಧನ್ಯವಾದಗಳು ಮೇಡಂ

    ReplyDelete
  7. ಪದ್ಯದ ಮೊದಲ ನಾಲ್ಕುಸಾಲುಗಳಂತೂ excellent !. ಸೊಗಸಾಗಿದೆ.

    ReplyDelete