Tuesday, November 29, 2011

ಮೂಕಂ ಕರೋತಿ ವಾಚಾಲಂ

ಲಹರಿ  :
ಯಾರದೋ (ಅದೂ ಒಬ್ಬ ರಾಕ್ಷಸನ ) ಮನೆಯಲ್ಲಿ ಅದೆಷ್ಟೋ ಕಾಲವಿದ್ದ ಹೆಂಗಸರಿಗೆ
ಆಶ್ರಯವಿತ್ತವನು ವಿಶ್ವಹಸ್ತನೇ ಆಗಿರಬೇಕು
ಎಲ್ಲೋ ಕುಳಿತು ದ್ರೌಪದಿಗಾದ ಅವಮಾನವ ಕಂಡು ಮಾನ ಉಳಿಸಿದವನು
ವಿಶ್ವ ಬಾಹುವೇ ಆಗಿರ ಬೇಕು

..............................................
ಮಗುವಿಲ್ಲದ ತಾಯಿಗೆ
ಇಲ್ಲದ ತೊಟ್ಟಿಲ, ಲಾಲಿಯ ಕೇಳಬಲ್ಲ.
ಎಲ್ಲ ತಾಯಂದಿರ ಮಗುವಾಗಬಲ್ಲ

ಇನಿಯ ನಿಲ್ಲದ ಗೋಪಿಕೆಗೆ
ಇಲ್ಲದ ಕನಸುಗಳಿಗೆ, ರಂಗ ತುಂಬಬಲ್ಲ
ಎಲ್ಲ ಹೆಣ್ಮನಗಳ ಸಖನಾಗಬಲ್ಲ

ಬಾಗಿದ ಬೆನ್ನ ಕುಬ್ಜೆಗೆ
ಇಲ್ಲದ ಗಂಧದ, ಪರಿಮಳವ ಸವಿಯಬಲ್ಲ
ಎಲ್ಲ ರೋಗ ಪರಿಹರಿಪ ವೈದ್ಯನಾಗಬಲ್ಲ

ಬಡತನವೇ ತಾನಾದ ಸುಧಾಮನಿಗೆ
ಇಲ್ಲದ ನೇಹದ, ಸವಿಯ ಉಣಿಸಬಲ್ಲ
ಎಲ್ಲ ಕೊರತೆಗಳ ನೀಗಬಲ್ಲ

ಅನಾಥರಾಗಿ ನಿಂತ ಸಾವಿರ ಸಾವಿರ ಮಾನಿನಿಯರಿಗೆ
ಇಲ್ಲದ ಆಸರೆಯ, ವಿಶ್ವಹಸ್ತದ  ಆಸರೆ ನೀಡಬಲ್ಲ
ಎಲ್ಲ ಪರಿತ್ಯಕ್ತೆಯರ ಆಸರೆಯಾಗಬಲ್ಲ

ರಣರಂಗದಲ್ಲಿ ಅಧೀರನಾದ ಪಾರ್ಥನಿಗೆ
ಇಲ್ಲದ ಧರ್ಮಚಕ್ಶುವಿಗೆ, ದೃಷ್ಟಿ ನೀಡಬಲ್ಲ
ಎಲ್ಲ ವಿಜಯರ ಸಾರಥಿಯಾಗಬಲ್ಲ

ಅವನೆಲ್ಲವಾಗಲು ನಾ ನನ್ನ ಮರೆತು ಅವನ ಕೂಗಬೇಕಲ್ಲ !

3 comments:

  1. ಸ್ವರ್ಣಾ,
    ಸರಾಗವಾಗಿ ಹರಿಯುತ್ತಿದ್ದ ಕಾವ್ಯವಾಹಿನಿಯ ಅಂಚಿನಲ್ಲಿ, sudden revelation! ಕವನ ಇಷ್ಟವಾಯಿತು. ನಿಮ್ಮ ಜೊತೆಗೆ ಒಂದು ಪುಟ್ಟ ಚರ್ಚೆ. ಕುಚೇಲನ ಹೆಸರು ‘ಸುದಾಮ’ ಅಥವಾ ‘ಸುಧಾಮ’? ಸುದಾಮ ಎಂದರೆ ತನ್ನ ಇಂದ್ರಿಯಗಳನ್ನು ಸರಿಯಾದ ನಿಯಂತ್ರಣದಲ್ಲಿ ಇಟ್ಟುಕೊಂಡವನು. ಸುಧಾಮ ಎಂದರೆ ಒಳ್ಳೆಯ ಮನೆ ಇದ್ದವನು. ಯಾವುದು ಸರಿ ಇರಬಹುದು? ಅವನ ನಿಜವಾದ ಹೆಸರಿನ proofಅನ್ನು ನನಗೆ ಯಾರೂ ಕೊಟ್ಟಿಲ್ಲ!

    ReplyDelete
  2. ನನ್ನ ಪ್ರಕಾರ ಸುದಾಮನೆ ಸರಿ ಏನೋ ಸರ್,
    ಹೆಂಡತಿ ಕೃಷ್ಣ ಹತ್ತಿರ ಎಲ್ಲ ಕೇಳಿ,ಹೇಳಿ ಎಂದಿದ್ದರೂ ಎನೂ
    ಕೇಳದೆ ಬಂದ ಅವರ ನಿಗ್ರಹ ದೊಡ್ದಲ್ಲವೇ ಸರ್? (ಕೇಳದಿದ್ದರೂ ಕೃಷ್ಣ
    ಎಲ್ಲ ಕೊಟ್ಟ ಅನ್ನುವುದು ಬೇರೆ :)
    ಹೀಗೆ ತಿದ್ದುತ್ತಿರಿ
    ಧನ್ಯವಾದಗಳು ಸರ್.

    ReplyDelete
  3. ಕೃಷ್ಣನೇ ಹಾಗೆ......
    ವಣಱನೆಗೆ ಸಿಕ್ಕರೂ ಪೂರ್ತಿ ಕೈಗೆ ಸಿಕ್ಕದ ಕಳ್ಳ....
    ಅಂತರಂಗ ಅರಿತವರಿಗೂ ಕೂಡ ಅಪೂರ್ಣ ಅವನ ಹರಹು...

    ಚನ್ನಾಗಿದೆ....

    ಅವನು "ಸುದಾಮ" ಬರೀ ಒಂದು ಬಾಲದಲ್ಲಿ ಬಡವಾಗಿಬಿಟ್ಟಿದ್ದಾನೆ.
    ಅವನು ಹುಟ್ಟಿ 11 ದಿನಕ್ಕೆ ಸುದಾಮನಾಗಿದ್ದಾನೋ ಇಲ್ಲಾ
    ಅವನ ಗುಣದಿಂದಾಗ ಸುದಾಮನಾಗಿದ್ದಾನೋ....

    ಕುಚೇಲ ಻ವನ ಮೂಲ ಹೆಸರಾ?

    ReplyDelete