Wednesday, February 01, 2012

ಈಶ ನಿನ್ನ ಮಾಯೆಯೊಳಗೋ

ಅಜ್ಜಿ ಮನೆ ಎಂಬುದು ಬಾಲ್ಯದ ಬಹುದೊಡ್ಡ ನೆನಪು. ನಮ್ಮಜ್ಜಿ ಮನೆ
ಒಂದು ಸಣ್ಣ ಕೋಣೆಯ, ರೈಲ್ವೆ ಬೋಗಿಯಂಥ   ಹಾಲಿನ  ಮನೆಯಾಗಿತ್ತು.
ಯಾರು ಎಲ್ಲೇ ಮಾತಾಡಿದರೂ ಇಡೀ ಮನೆಗೆ ಕೇಳುತಿತ್ತು.

ಅಜ್ಜಿ ಬೆಳಿಗ್ಗೆ ಐದು ಅಥವಾ ಅದಕ್ಕೂ ಮುಂಚೆ ಎದ್ದು, ಬೆಳಗು ಜಾವದಿ ಬಾರೋ ಹರಿಯೇ
ಅಂತ ಕರೆಯಲು ಶುರುವಿಟ್ಟರೆ, ಹರಿ ಬರುತ್ತಿದ್ದನೋ ಇಲ್ಲವೋ ಗೊತ್ತಿಲ್ಲ , ಆದರೆ ನಮ್ಮ ನಿದ್ದೆ
ಕೆಲ ಕಾಲ ಓಡುತ್ತಿತ್ತು. ಈ ಅಜ್ಜಿಗೆ ನಿದ್ದೆ ಬರಲ್ಲ ಅಂದ್ರೆ ನಮ್ಮ ತಲೆ ಯಾಕೆ ತಿಂತಾರೋ ಅಂತ ಬೈಕೊಂಡು ಮತ್ತೆ ಮಲಗ್ತಿದ್ವಿ.

ಹಾಗೆ ಬೆಳಗು ಜಾವದಿ ಹರಿಯ ಕರೆದ ಮೇಲೆ, ನಿಧಾನ ವಾಗಿ ಅಜ್ಜಿ ಈಶ ನಿನ್ನ ಚರಣ ಭಜನೆ ಆರಂಭಿಸುತ್ತಿದ್ದರು.
ಅಜ್ಜಿಯ ಮಗಳೆಂದ ಮೇಲೆ ಅಮ್ಮನೂ ಅದ ಹಾಡುತ್ತಿದ್ದರು. ಆದರೆ ಐದಕ್ಕಲ್ಲ ಸ್ವಲ್ಪ ತಡವಾಗಿ.
ಹಾಗೆ ನನಗೆ ಈಶ ನಿನ್ನ ಚರಣ ಭಜನೆ ಪರಿಚಯವಾದದ್ದು. ಅಮ್ಮನಾಗಲಿ, ಅಜ್ಜಿಯಾಗಲಿ ನಮಗದ ಕಲಿಸಲಿಲ್ಲ,
ಬಹುಶ ತುಂಬಾ ದೊಡ್ಡ ಹಾಡು ಅಂತ ಇರಬಹುದು. ನಾವೂ ಎಂದೂ ಅವರೊಟ್ಟಿಗೆ ಹಾಡುವ ಪ್ರಯತ್ನ ಪಟ್ಟಿದ್ದಿಲ್ಲ.
ಒಂದು ದಿನ ಹಾಗೆ ತಂಗಿ ನಾನು ಮಾತಾಡುತ್ತಿರುವಾಗ ಯಾಕೋ ಆ ಹಾಡಿನ ನೆನಪಾಯ್ತು, ಹೇಳುತ್ತಾ ಹೋದರೆ (ಓದುತ್ತಾ ಹೋದರೆ) ಸುಮಾರಾಗಿ ಪೂರ್ತಿ ಹಾಡು ನೆನಪಿತ್ತು. ಆಮೇಲೆ ನಾನದರ ಸಾಹಿತ್ಯ - ಲಾಲಿತ್ಯಕ್ಕೆ ಮಾರು ಹೋದೆ.

ಇಂದಿಗೂ ನನ್ನ ಮೆಚ್ಚಿನ ದಾಸರ ಪದ ಈಶ ನಿನ್ನ ಚರಣ ಭಜನೆ, ನಂತರದ ಸ್ಥಾನ ನೀ ಮಾಯೆಯೋಳಗೋ ಕ್ಕೆ.
ಈಶ ನಿನ್ನ.... ದಲ್ಲಿ ನನಗಿಷ್ಟವಾದ ಕೆಲವು ನುಡಿಗಳನ್ನ ಇಲ್ಲಿ ಹಾಕಿದ್ದೇನೆ.

ಹಿಂದನೇಕ ಯೋನಿಗಳಲಿ । ಬಂದು ಬಂದು ನೊಂದೆನಯ್ಯ । ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ ।।೪।।
ಮದನನಯ್ಯ ನಿನ್ನ ಮಹಿಮೆ । ವದನದಲ್ಲಿ ನುಡಿಯುವಂತೆ । ಹೃದಯದೊಳಗೆ ಹುದುಗಿಸಯ್ಯ ಮಧುಸೂದನ ।।೬।।
ಏಸು ಜನ್ಮ ಬಂದರೇನು । ದಾಸನಲ್ಲವೇನು ನಾನು । ಘಾಸಿ ಮಾಡದಿರು ಇನ್ನು ವಾಸುದೇವನೆ ।।೧೪।
ಹರುಷದಿಂದ ನಿನ್ನ ನಾಮ । ಸ್ಮರಿಸುವಂತೆ ಮಾಡು ನೇಮ । ಇರಿಸು ಚರಣದಲಿ ಪ್ರೇಮ ಪುರುಷೋತ್ತಮ ।।೧೭।।
ಪುಟ್ಟಿಸಲೇ ಬೇಡ ಇನ್ನು । ಪುಟ್ಟಿಸಿದಕೆ ಪಾಲಿಸಿನ್ನು । ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ।।೨೪।।

ಏಸು ಜನ್ಮ..ಎಂಬ ನುಡಿಯಲ್ಲಿ 'ಏಸು' ಎಂಬ ಪದ ಕೇಳಿ, ಕಾನ್ವೆಂಟ್ನಲ್ಲಿ  ಓದುತ್ತಿದ್ದ ನಾನು
ಓಹ್, ಕನಕ ದಾಸರೂ ಏಸುವಿನ ಬಗ್ಗೆ ಬರೆದಿದ್ದಾರೆ, ಅಂದ್ಕೊಂಡಿದ್ದೆ. 

ವಂದನೆ ಕನಕ ನಾಯಕರ ಚರಣಕ್ಕೆ
ರಂಗನ ತೋರ್ವ ಮಂಗಳ ಪಾದಕ್ಕೆ

ಹುಟ್ಟಿ ಅರಸು ಮನೆತನದಲಿ
ಬೆಳಿದಿರಿ ಸಿರಿಯ ನಡುವಲಿ

ಸಿಕ್ಕಿತು ಕೊಪ್ಪರಿಗೆ ಹೊನ್ನು
ನಿಮ್ಮ ನಾಮ ಅನ್ವರ್ಥವಿನ್ನು

ಅಷ್ಟರಲಿ ನಿಮ್ಮ, ಹರಿ ಕೂಗಿ ತಾ ಕರೆದ
ಮುರ ವೈರಿ ನಿಮ್ಮ ತಾ ಪೊರೆದ

ಕಾಗಿನೆಲೆಯಾಯ್ತು  ಕೇಶವನ ನೆಲೆ
ನಿವಾದಿರಿ ಸಕಲ ಜನಕೆ ಭಕ್ತಿಯ ಸೆಲೆ

ಅದೆಷ್ಟು ಪದಗಳ ಹಾಡಿದಿರಿ ನೀವು ಆ ಗೋವಿಂದನಿಗಾಗಿ
ಅವನೂ ಕೇಳಿರಬಹುದು ಆನಂದವಾಗಿ

ಅರ್ಥವಾಗದು ನನಗೆ ನಿಮ್ಮ ಮುಂಡಿಗೆಗಳು
ಆದರೆ ಕೆಲವು ಪದಗಳು  ಮಾತ್ರ ಅಚ್ಚ ಮಂಡಿಗೆಗಳು

ದೇಹವಿರುವ ತನಕ  ಸಾಹಿತ್ಯದರಿವು
ಜೀವ ಹೋದ ಮರು ಘಳಿಗೆ  ಎಲ್ಲ ಬರಿವು

ಅದಕೆ ಬೇಡುವೆ, ತೋರಿ ರಂಗನ ಪಾದವ
ಇಹ ಪರಂಗಳ  ನಿಜದ ಮೋದವ
 

7 comments:

  1. ಸ್ವರ್ಣಾ ಮೇಡಮ್,
    ಬಾಲ್ಯದ ನೆನಪುಗಳಲ್ಲಿ ಅಜ್ಜ, ಅಜ್ಜಿಯರ ನೆನಪು ಬಹಳ ಸಿಹಿಯಾದದ್ದು ಅಲ್ಲವೆ? ‘ಏಸು ಭಜನೆ’ ಓದಿ ನಗು ಬಂದಿತು.
    ನನ್ನ ಶ್ರೀಮತಿಯವರೂ ಸಹ ಕಾನ್ವೆಂಟಿನಲ್ಲಿ ಓದಿದವರು. ಅವರ ಶಿಕ್ಷಕರು ಒಂದು ದಿನ ‘ಜಟಕಾ ಟೇಲ್ಸ್’ ಎಂದು ಹೇಳಿದ್ದನ್ನು, ಇವರು ಮನೆಯಲ್ಲಿ ಹಾಗೇ ಓದಿದ್ದರು. ಆವಾಗ ಅವಳ ತಂದೆ, ತಮ್ಮ ಮಗಳಿಗೆ, "ಇದು ಜಟಕಾದವರ ಕತೆ ಅಲ್ಲಮ್ಮಾ, ಇದು ಬುದ್ಧನ ಜಾತಕ ಕತೆಗಳು" ಎಂದು ತಿಳಿಸಿ ಹೇಳಿದರಂತೆ!

    ReplyDelete
  2. :) ಪ್ರತಿಕ್ರಿಯೆಗಾಗಿ ಧನ್ಯವಾದಗಳು

    ReplyDelete
  3. ದಾಸ ಸಾಹಿತ್ಯ ನಮ್ಮ ಮನಸ್ಸುಗಳ ಮೇಲೆ ಬೀರುವ ಪರಿಣಾಮ ಅಂತದು.

    ಅದಕಾಗಿಯೇ ಶತ ಶತಮಾನಗಳ ನಂತರವೂ ದಾಸರು, ತತ್ವ ಙ್ಞಾತಿಗಳು ಮತ್ತು ಶರಣರು ಪ್ರಸ್ತುತರೇ.

    ReplyDelete
  4. ದಾಸ ಸಾಹಿತ್ಯ ತುಂಬಾ ಒಳ್ಳೆಯ ಸಾಹಿತ್ಯ ಕನ್ನಡಕ್ಕೆ.. ಒಳ್ಳೆ ಬರಹ ಮೇಡಂ ..

    ReplyDelete
  5. ತಮ್ಮಿಬ್ಬರಿಗೂ ಧನ್ಯವಾದಗಳು

    ReplyDelete
  6. ಸ್ವರ್ಣ..ಅಜ್ಜಿಯರಿಂದ ಕಥೆಗಳಲ್ಲದೇ ಧಾರ್ಮಿಕ ಮತ್ತು ಮಾನವೀಯತೆ ಪಾಠಗಳೂ ಸಿಗುತ್ತಿದ್ದ ದಿನಗಳು..ಈಗ ಅಜ್ಜ ಅಜ್ಜಿಗೆ ಮೊಮ್ಮಕ್ಕಳು ಸಿಗೋದೇ ಅಪರೂಪ ಸಿಕ್ಕರೂ ಕಥೆ ಕೇಳೋದು ಇನ್ನೂ ಅಪರೂಪ...

    ReplyDelete
  7. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್ .

    ReplyDelete