Thursday, March 15, 2012

ಹಳ್ಳ ಸೇರದ ಹನಿಗಳು....ಭಾವಬನಿಗಳು

 ಭಾವಬನಿಗಳು ಎಂಬ ಹೆಸರನ್ನ ಹಿರಿಯರಾದ ಸುನಾಥ್ ಸರ್ ಸೂಚಿಸಿದ್ದು.
ಹೊಸ ಪದ ಮತ್ತು it seems to be more apt,  ಅದಕ್ಕೆ ಆ ಶೀರ್ಷಿಕೆಯನ್ನೂ ಕೊಟ್ಟೆ.
 ೧. ದಾರಿ ಅದೇ,
ಕೈಗಳೂ ಎರಡಿವೆ,
ಅಂದು ನಿನದೊಂದು ನನದೊಂದು
ಬೆಸೆದಿತ್ತು ಬಂಧದಲಿ ,
ಇಂದು ನನದೆರಡು ಕೂಡಿವೆ
ಪ್ರಾರ್ಥನೆಯಲಿ

೨. ಮುಗಿಲಿನ ತುಂಬೆಲ್ಲಾ ಅವನದೇ ಬಿಂಬ
ಇವತ್ತು ಅಮಾವಾಸ್ಯೆ, ನನಗೇಕೋ ನಂಬಿಕೆ ಬಾರದು
ಕಂಬನಿ ಹರಿಸಿ ನೆನಪ  ಹೊರ ಕಳಿಸೋಣವೆಂದರೆ
ಹಾಳಾದ್ದು, ಕಂಬನಿಯಲ್ಲೂ ಅವನದೇ ಬಿಂಬ !

೩ ಮಗು ಹೊರ ಬಂತೆಂಬ ಕೂಗು ಕೇಳಿ
ಮಲಗಿದ ತಾಯಿಯ ಕಣ್ಣಲ್ಲೆರಡು   ಹನಿ,
ಒಂದು ತನ್ನ ಬಿಂಬ ಕಂಡದ್ದಕ್ಕಾಗಿ
ಮತ್ತೊಂದು ಅದು ಒಡಲಿಂದ ದೂರಾದ್ದಕ್ಕಾಗಿ

೪.  ಮದುವೆ  ಮುಗಿಸಿದ ಬೀಗತಿಯರಿಬ್ಬರ ಕಣ್ಣು ಜಿನುಗುತ್ತಿದೆ
    ಮಗಳ ತಾಯಿಗೆ ಮಗಳು ದೂರಾಗುವ  ದುಃಖ
 ವರನ  ತಾಯಿಗೆ,  'ಸೊಸೆ'ಯ  ಭಾರದ ದುಃಖ

೫. ಬಟ್ಟ ಬಯಲಲಿ,
ಕಡಿದ ಮರದಲಿ,
ಒಂಟಿ ಹಕ್ಕಿಯ ಮೌನ ತೂಗುತಿತ್ತು
ಮುರಿದ ಬಂದದಲಿ
ಹರಿದ ಭಾವಗಳಲಿ 
ನನ್ನ 'ಇಂದು' ಮುಗಿಯುತ್ತಿತ್ತು

೬. ನನ್ನ ಕಥೆ ಬರೆಯೋಣವೆಂದು ಕೂತೆ
ಒಂದು ಹಾಳೆ ದೊಡ್ದದೆನಿಸಿ, ಮಡಚಿ ಸಣ್ಣದಾಗಿಸುತೆ
ನಡೆದೆ, ಮಡಚಿ ಮಡಚಿ ಕೊನೆಗೆ ಉಳಿದದ್ದು ಒಂದು ಬಿಂದು
ನಾನು ನೀನು ಅದರಲ್ಲಿ ಒಂದು 

6 comments:

  1. ಸ್ವರ್ಣಾ,
    ಅನೇಕ ಸಲ ಓದಿದೆ. ಪ್ರತಿ ಸಲವೂ ಭಾವೋದ್ವೇಗವಾಗುತ್ತಿತ್ತು.
    ಈ ಹನಿಗವನಗಳನ್ನು ಭಾವಬನಿಗಳು ಎಂದು ಕರೆಯಬಹುದೆ? (ಬನಿ ಪದಕ್ಕೆ ದಪ್ಪವಾದ ರಸ, ತೇಜಸ್ಸು, ಕಳೆ ಮೊದಲಾದ ಅರ್ಥಗಳಿವೆ.)

    ReplyDelete
  2. ಇಲ್ಲಿನ ಹನಿಗಳಿಗಿಂಥ ನಿಮ್ಮ ಪ್ರತಿಕ್ರಿಯೆ ಸೊಗಸಾಗಿದೆ ಸರ್.
    ಧನ್ಯವಾದಗಳು

    ReplyDelete
  3. ತುಂಬಾ ಮಾರ್ಮಿಕ ಮತ್ತೆ ಚಂದ ಹನಿಗಳು...:) ಖುಷಿಯಾಯ್ತು ಮೇಡಂ.

    ReplyDelete
  4. ಧನ್ಯವಾದಗಳು ಭಟ್ಟರಿಗೆ

    ReplyDelete
  5. ಸ್ವರ್ಣಾ,
    ‘ಹಳ್ಳ ಸೇರದ ಹನಿಗಳು’ ತುಂಬ ಸಮರ್ಪಕವಾದ ಶೀರ್ಷಿಕೆಯಾಗಿದೆ. ಭಾವಬನಿ ಎನ್ನುವದು ಈ ಹನಿಗಳ ಸ್ವರೂಪದ ಬಗೆಗೆ ನಾನು feel ಮಾಡಿಕೊಂಡ ಬಗೆ. Anyway ನಿಮಗೂ ಸಹ ಈ ಪದ ಲಾಯಕ್ ಆದದ್ದು ಸಂತೋಷ ಕೊಟ್ಟಿದೆ.

    ReplyDelete
  6. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾಗಳು ಸುನಾಥ್ ಸರ್

    ReplyDelete