Friday, December 23, 2011

Unrelated

೧. ಅವತಾರಿಯಲ್ಲದಿದ್ದರೂ  ಅವನ ತಮ್ಮನೊಂದಿಗೆ ಮದುವೆ ಎಂದು ಹಿಗ್ಗಿದ್ದೆ
"ಅವತಾರಿಯ ತಮ್ಮನೆಂದ ಮೇಲೆ ಅವನು, ಅವನ ಶೇಷನೇ ಆಗಿರಬೇಕಲ್ಲವೇ?"  ಎಂದಿತ್ತು ಮನಸು.
ನಿನ್ನೊಂದಿಗೆ  ಸಪ್ತಪದಿ ತುಳಿಯುವಂತೆ ಮಾಡಿದ ಭಾಗ್ಯವ ನೆನೆದು ಹಿಗ್ಗಿದ್ದೆ.

ನಿನ್ನ ವಂಶದ ಕೀರ್ತಿಗಿನ್ನು ನಾನೂ ಭಾಜನಳು ಎಂಬ ಗಾಢ ವಾದ ಭಾವದೊಂದಿಗೆ ಅಕ್ಕಿಯನ್ನ ಚಿಮ್ಮಿಸಿದ್ದಾಯ್ತು
ಅತ್ತೆ ಮನೆಯ ಹುಳಿನೋವುಗಳನ್ನ ಅನುಭವಿಸುವ  ಮುನ್ನವೇ, ನೀ ಹೊರಟಾಗಿತ್ತು
ನನ್ನ ಹಾಸಿಗೆಯ ಚಾದರ ಸುಕ್ಕಾಗಲೇ ಇಲ್ಲ !

ಅಣ್ಣನೊಂದಿಗೆ ಹೊರಟು ನಿಂತ ನಿನ್ನ  ಹಟಕ್ಕೆ ಸಮನಾಗಿ ನಾನೂ  ಅಕ್ಕನೊಂದಿಗೆ ಹೊರಡುವೆನೆನ್ನಬಹುದಿತ್ತೇನೋ?
ಅದನ್ನರಿವ ಮುಂಚೆಯೇ ನೀವೆಲ್ಲ ನಡೆದಾಗಿತ್ತು 
ನನ್ನ ಹಟವನ್ನ ಯಾರೂ ಕೇಳಲೇ ಇಲ್ಲ !

ನೀ ಮತ್ತೆ ಬರುವ ಹೊತ್ತಿಗೆ ಮೌನ ನನಗೆ ಹಿತವೆನಿಸುತಿತ್ತು  ಏಕಾಂತ ಒಗ್ಗಿ ಹೋಗಿತ್ತು
ನೀನಿಲ್ಲದ ಹೊತ್ತು ನನ್ನರಿವುದರಲ್ಲಿ ಸರಿದು ಹೋಗಿತ್ತು
ಹೇಳಲು ನನ್ನಲ್ಲೇನೂ ಉಳಿದಿರಲೇ ಇಲ್ಲ !

ಚರಿತ್ರೆ  ದಾಖಲಿಸುವವರು ಏನನ್ನ ದಾಖಲಿಸಬೇಕೆಂಬುದನ್ನ ನಿರ್ಧರಿಸಿಯಾಗಿತ್ತು
ನನ್ನ ಕನಸುಗಳು, ಕಂಬನಿಯ ರಾತ್ರಿಗಳು ಹಾಡಾಗಲೇ ಇಲ್ಲ
ನನ್ನ ನಿನ್ನ ಹೆಸರೂ ಸೇರಲಿಲ್ಲ !

ಅದಾರೋ ಶಿಲ್ಪಿ ಗುಡಿಯಲ್ಲಡಿಲು ನನ್ನ  ಮೂರ್ತಿ ಕೆತ್ತ  ಹೊರಟನಂತೆ
ಮುಖದಲ್ಲಿ ಮಂದಹಾಸವನೆಂತು  ತರುವುದು ?
ಅದಕೆ ನನ್ನ ಮೂರ್ತಿಯೂ ನಿನ್ನ ಸೇರಲಿಲ್ಲ

ಈಗ ಇನ್ನಾವುದೋ ಯುಗದಲ್ಲಿ ಒಂದಷ್ಟು ಜನ  ನನ್ನ ಬಗ್ಗೆ ಬರೆಯುತ್ತಾರೆಂದು ಕೇಳಿ ನಾ ನಕ್ಕೆ
ಏನೆಂದು ಬರೆಯಬಹುದು ?
ಇಷ್ಟು ಯುಗಗಳು ಬೇಕಾದವೇ ನನ್ನ ಕಂಬನಿ ಲೋಕಕ್ಕೆ ಕಾಣಲು?

ಅದೇಕೋ  ಈಗ ಚರಿತ್ರೆಯ  ಭಾಗವಾಗುವ ಆಸೆ ಇನ್ನಿಲ್ಲ
ನೋವ ಹಾಡಾಗಿಸುವ  ಪ್ರಯತ್ನವೇ ನಗು ಬರಿಸುತ್ತದೆ
ಅಣ್ಣನೊಂದಿಗೆ ನಿಲ್ಲುವುದು ನಿನ್ನ ಅಸ್ಥಿಥ್ವವಾದರೆ, ನನ್ನದು ಒಂಟಿ ಹಕ್ಕಿಯ ಮೌನ ಗಾನ

ಜಯ ವಿಜಯರ ಮೇಲೆ ವಿಜಯ ಸಾದಿಸಿದ ತೃಪ್ತಿ ನಿನ್ನದಾದರೆ
ನನ್ನೊಳಗಣ ಆರು ರಾಕ್ಷಸರ ಮೇಲೆ ಜಯಿಸಿದ ಆನಂದ ನನ್ನದು
ನನ್ನ ಹಾಡನ್ನ ಯಾರೂ ಹಾಡುವುದು ನನಗೆ ಬೇಕಿಲ್ಲ
ಎಲ್ಲ ಆತ್ಮಗಳಿಗೂ ಒಂದು ಹಾಡಿರಲೇ ಬೇಕೆಂಬ ಯಾವ ನಿಯಮವೂ ಇಲ್ಲ !



೨. ಅದೆಲ್ಲಿ ಕುಂತೆ ಲೋಕ ಮಾಡಿ ಶಿವನೇ?
ಮರುಳರನ್ನ ಆಡ ಬಿಟ್ಟು ಅದೆಲ್ಲಿ ಹೋದೆ?

ನಾವೆಸೆವ ಪ್ಲಾಸ್ಟಿಕು ತಿಂದು ಸಾಯ್ವ ದನ ನಮ್ಮದೇ ಗಂಗೆ ತುಂಗೆಯರಾಗಿರಬಹುದು
ನಾಳೆ ನನ್ನದೇ ಕಂದನಿಗೆ ಹಾಲಿಲ್ಲದೆ ಹೋಗಬಹುದು
ಎಂಬ ಅರಿವನ್ನು ನಿನ್ನೊಡನೆ ಒಯ್ದಿಯಾ ?

ಅದೆಲ್ಲೋ ಘಟ್ಟದಲ್ಲಿ ನನ್ನ ಮನೆಯ ಬಾಗಿಲಿಗಾಗಿ ಕಡಿದಮರ, ನನ್ನ ಹೊಲಕ್ಕೆ ಮಳೆ ತರುತಿತ್ತೇನೋ ?
ನಾಳೆ ನನ್ನವರಾರಿಗೂ ಅನ್ನವೇ ಇಲ್ಲದಾಗಬಹುದು
ಎಂಬ ತಿಳುವಳಿಕೆಯನ್ನೆಲ್ಲಿ ಬಚ್ಚಿಟ್ಟೆ?

ಧರಿತ್ರಿಯ ಒಡಲ ಬಗೆದು ತೆಗೆದ ಖನಿಜಗಳೆಲ್ಲ, ನಮ್ಮದೇ ಆಹಾರದ ಅಂಶವಾಗಬೇಕಾದವು
ನಾಳಿನ ಜನಾಂಗ ಸತ್ವ ರಹಿತವಾಗಹುದು
ಎಂಬ ಸತ್ಯದ ಬೆಳಕನೆಲ್ಲಿ  ಅಡಗಿಸಿಟ್ಟೆ?

ಎಲ್ಲ ಮರೆಸಿ, ಮುಚ್ಚಿಟ್ಟು ಈ ಭುವಿಯ ಉದ್ಹ್ಧರಿಸಲು ಬಂದವರು ನಾವು ಎಂಬ
ಅಹಂಕಾರವನ್ನ ಮಾತ್ರ ಇಲ್ಲೇ ಬಿಟ್ಟೇಕೆ  ಹೋದೆ?













6 comments:

  1. 1. ಆಕೆಯ ಬಗ್ಗೆ ಒಬ್ಬ ಹೆಣ್ಣು ಮಗಳು ಬರೆದಿದ್ದರೆ ಹೇಗಿರಬಹುದೆಂದು ಕುತೂಹಲದಿಂದಿದ್ದೆ. ನನ್ನ ನಿರೀಕ್ಷೆಗಳನ್ನು ನಿಮ್ಮ ಕವಿತೆ ಪೂರೈಸಿತು.

    ಪಾತ್ರದ ಅಳಲನ್ನು ಆಕೆಯ ಬಾಯಿಯಲ್ಲೇ ಚಿತ್ರಿಸಿಕೊಟ್ಟಿದ್ದೀರಿ. ದಾಂಪತ್ಯ ಜೀವನದಲ್ಲಿ 14 ವರ್ಷಗಳು ಮಣ್ಣಾದ್ದಂತೂ ನಿಜ.

    ReplyDelete
  2. 2. ದೇವರನ್ನು ಪ್ರಶ್ನಿಸುತ್ತ ಮನುಜನ ಸ್ವಾರ್ಥವನ್ನೂ ಝಾಡಿಸಿದ್ದೀರಾ!

    ReplyDelete
  3. ಧನ್ಯವಾದಗಳು ಸರ್

    ReplyDelete
  4. (೧)ಬಾಳು ಪಾಳು ಬಿದ್ದ ಹೊಲದಂತಾಯ್ತು. ಅಣ್ಣನ ಶೇಷವಾಗುವದೇ ಆ ಶೇಷನ ಬದುಕು. ಇವಳ ಬದುಕು ಶೂನ್ಯ. ಅವಳ ನಿಟ್ಟುಸಿರು ನಿಮ್ಮ ಕವನದಲ್ಲಿ ಕೇಳುತ್ತಿದೆ.
    ಅವನಿಗೆ ಇವಳು unrelated relative!
    (೨)ಎಲ್ಲೋ ಜರುಗುವ ಕ್ರಿಯೆಯ ಪರಿಣಾಮ ನಮ್ಮನ್ನೂ ತನ್ನ ವ್ಯಾಪ್ತಿಯಲ್ಲಿ ಹಿಡಿದಿದೆ. Unrelated relative!

    ನಿಮ್ಮ ಕವನಗಳು ನಮಗೆ very much related ಆಗಿವೆ.

    ReplyDelete
  5. ಹೌದು ಸರ್. ತಮ್ಮ ಮಾತು ಸತ್ಯ.
    ಪ್ರತಿಕ್ರಿಯೆಗಾಗಿ ಧನ್ಯವಾದಗಳು

    ReplyDelete
  6. ಎರಡೂ ಕವಿತೆಗಳು ಸತ್ವಯುತ ಕವಿತೆಗಳು.ಇಷ್ಟವಾದವು.

    ReplyDelete